Wednesday 28 November 2012

ಕಬ್ಬಿನ ರಸ ಬದುಕಿನ ಸವಿರಸ

ಮಳೆಗಾಲ ಮುಗಿದು ಇನ್ನೇನು ಚಳಿ, ಬೆಸಿಗೆ ಕಾಲದ ಹೊತ್ತು. ಮನುಷ್ಯನ ದಾಹ ಇಂಗಿಸಲು ತಂಪನೆಯ ಪಾನೀಯಗಳದ್ದೇ ಕಾರುಬಾರು ಅದರಲ್ಲೂ ಕಬ್ಬಿನ ರಸಕ್ಕೆ ಅಗ್ರ ಸ್ಥಾನ. ಬೇಸಿಗೆಯ ದಗೆಗೆ ತೃಷೆಯಾದಾಗ ತಂಪಾಗಿಸಲು ಕಬ್ಬಿನ ರಸ ಕುಡಿದರೆ ದಾಹ ತಣಿದು ಮನಸ್ಸು ಉಲ್ಲಾಸವಾಗುತ್ತದೆ. ಹಾಗಾಗಿ ಕಬ್ಬನ ರಸಕ್ಕೆ ಭಾರಿ ಡಿಮಾಂಡ್. ಇದನ್ನೇ ವೃತ್ತಿಯನ್ನಾಗಿ ನೆಚ್ಚಿ ಅದೆಷ್ಟೋ ಮಂದಿ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ಮಹಿಳೆಯೊಬ್ಬರು ತಮ್ಮ ಬದುಕಿನ ಬಂಡಿಯನ್ನು ಎಳೆಯಲು ಕಬ್ಬಿನ ರಸ ಅಂಗಡಿ ಇಟ್ಟು ಕೊಂಡಿದ್ದಾರೆ.
ಸುಮಾರು ಐವತ್ತು ವರ್ಷಗಳಿಂದ ಕಬ್ಬಿನ ಜ್ಯೂಸ್ ಅಂಗಡಿಯೊಂದು ಉಜಿರೆಯಲ್ಲಿದೆ. ಆ ಅಂಗಡಿಯ ಯಜಮಾನಿ ಮೀರಾ ಶೆಣೈ. ಉಜಿರೆಯ ಮುಖ್ಯ ರಸ್ತೆಯ ಬಸ್ ಸ್ಟ್ಯಾಂಡ್ ಎದುರುಗಡೆ ಕಾಣ ಸಿಗುವ ಶೆಣೈ ಜ್ಯೂಸ್ ಸೆಂಟರ್ಗೆ ಇವರೇ ವಾರಿಸುದಾರರು. ತನ್ನ ಗಂಡನ ಕಾಲಾದ ನಂತರ ಸ್ವಾವಲಂಬಿಯಾಗಿ ಬದುಕು ಕಟ್ಟಬೇಕೆಂಬ ಛಲದಿಂದ ಗಂಡನ ಕಾಯಕವನ್ನೇ ಮುಂದುವರಿಸಿ ಜೀವನದಲ್ಲಿ ಯಶ ಸಾಧಿಸುತ್ತಿರುವ ಸೃಜನಶೀಲ ಮಹಿಳೆ. ಅವರು 53ರ ಹರೆಯ
ಕಬ್ಬಿನ ರಸದ ವ್ಯಾಪಾರ ಅದರ ಹಾಲು ಕುಡಿದಂತೆ ಸಲೀಸಲ್ಲ. ಸಾಕಷ್ಟು ಪೂರ್ವ ತಯಾರಿ ಬೇಕು. ಕೆಲಸಕ್ಕೆ ಜನರನ್ನು ಹೊಂದಿಸಬೇಕು, ಹಾಸನ ಶಿವಮೊಗ್ಗ, ಮಂಡ್ಯ, ಚಿಕ್ಕಮಗಳೂರಿನಿಂದ ಕಬ್ಬುಗಳನ್ನು ಸಗಟಾಗಿ ಖರೀದಿಸಲು ಮೊದಲೇ ಕಾದಿರಿಸಬೇಕು. ಸಾರಿಗೆ ವೆಚ್ಚ ಕೆಲಸಗಾರರಿಗೆ ಸಂಬಳ ಹೀಗೆ ಎಲ್ಲವನ್ನೂ ಸಂಬಾಳಿಸಿಕೊಂಡು ಅಂಗಡಿ ನಡೆಸುವುದೆಂದರೆ ಕಷ್ಟಸಾಧ್ಯ. ಆದರೂ ಇವರು ಎಲ್ಲಾ ಒತ್ತಡವನ್ನೂ ನಿರಾಯಸವಾಗಿ ನಿವಾರಿಸಿ ಸುಮಾರು ಏಳು ವರ್ಷದಿಂದ ತನ್ನ ಪತಿಯ ಇಚ್ಛೆಯಂತೆ ಅವರ ಉದ್ಯೋಗವನ್ನೇ ಮುನ್ನಡೆಸುತ್ತಾ ಬಂದಿದ್ದಾರೆ.
ನನ್ನದು ಕಬ್ಬಿನೊಂದಿಗಿನ ಏಳುಬೀಳು ಜೀವನ. ಈ ಉದ್ಯೋಗದಲ್ಲಿ ಲಾಭದ ಲೆಕ್ಕಾಚಾರ ಹಾಕುವುದು ತುಂಬಾ ಕಷ್ಟದ ಕೆಲಸ. ಬೇಸಿಗೆಯಲ್ಲಿ ಅಧಿಕ ಲಾಭವಾದರೆ, ಮಳೆಗಾಲದಲ್ಲಿ ಇರುವೆಯೂ ಈ ಕಡೆ ನುಸುಳುವುದಿಲ್ಲ. ಆಗ ಅಧಿಕ ನಷ್ಟ. ಕೇವಲ ಚಳಿಗಾಲದ ಮಧ್ಯ ತಿಂಗಳು ಮತ್ತು ಬೇಸಿಗೆ ಕಾಲದಲ್ಲಿ ಮಾತ್ರ ಕಬ್ಬಿನ ಪಾನಿಯಾಕ್ಕೆ ಅಧಿಕ ಬೇಡಿಕೆ. ಈ ಸಮಯದಲ್ಲಿ ದೊರೆತ ಲಾಭದಿಂದ ನಮ್ಮ ಜೀವನ ಎನ್ನುತ್ತಾರೆ ಮೀರಾ ಶೆಣೈ.
ಕಬ್ಬಿಗೆ ಬೇಸಿಗೆ ಕಾಲದಲ್ಲಿ ಭಾರಿ ಬೇಡಿಕೆ ಇರುತ್ತದೆ. ಇಪ್ಪತ್ತು ಕಬ್ಬುಗಳನ್ನು ಜೋಡಿಸಿದ ಒಂದು ಕಟ್ಟು ಕಬ್ಬಿಗೆ 150 ರೂ ಇರುತ್ತದೆ. ಅದರಿಂದ 30 ಗ್ಲಾಸ್ ಕಬ್ಬಿನ ರಸ ತಯಾರಿಸಬಹುದು. ಒಂದು ಗ್ಲಾಸ್ ಜ್ಯೂಸ್ಗೆ 10ರೂ ಗಳಂತೆ 300ರೂ ಡುಡಿಮೆಯನ್ನು ಒಂದು ಕಟ್ಟಿನಿಂದ ಪಡೆಯಬಹುದು. 150 ರೂಗಳ ಲಾಭ ಒಂದು ಕಟ್ಟಿನಲ್ಲಿ ದೊರೆತರೂ ಕಬ್ಬಿನ ಸಿಪ್ಪೆ ತೆಗೆಯಲು ಕೆಲಸದವರಿಗೆ ಕಬ್ಬಿನ ಜ್ಯೂಸ್ ತಯಾರಿಸುವ ಯಂತ್ರದ ನಿರ್ವಾಹಣೆ, ಸಾರಿಗೆ ಹೀಗೆ ಎಲ್ಲಾ ಖರ್ಚುಗಳನ್ನು ಹೊರತು ಪಡಿಸಿದರೆ 50 ರೂ ಲಾಭ ಪಡೆಯಬಹುದು ಎಂದು ಅವರು ತಿಳಿಸುತ್ತಾರೆ.
'ಹಿಂದೆ ಚಕ್ರ ತಿರುಗಿಸಿ ಕಬ್ಬನ್ನು ಹಿಂಡಿ ಜ್ಯೂಸ್ ತಯಾರಿಸಬೇಕಿತ್ತು ಈಗ ತಂತ್ರಜ್ಞಾನ ಮುಂದುವರಿದಿದ್ದರಿಂದ ಸ್ವಯಂಚಾಲಿತ ಯಂತ್ರ ಬಳಕೆ ಮಾಡುತ್ತಿದ್ದೇವೆ ಹಾಗಾಗಿ ಕೆಲಸದ ಒತ್ತಡ ಸ್ವಲ್ಪ ಕಡಿಮೆ. ಆದರೆ ಕಬ್ಬಿನ ಸಿಪ್ಪೆ ತೆಗೆಯಲು, ಅದನ್ನು ಪೆರೆಸಲು ಕೆಲಸಗಾರರ ಕೊರತೆ ಎದುರಾಗುತ್ತಿದೆ'. ಎನ್ನುತ್ತಾರೆ ಮೀರಾ ಶೆಣೈ 
ಉಜಿರೆ ಧರ್ಮಸ್ಥಳ ಒಂದು ಪ್ರೇಕ್ಷಣೀಯ ಸ್ಥಳ. ಯಾತ್ರಾರ್ಥಿಗಳು ಹೆಚ್ಚಾಗಿ ಈ ಪರಿಸಿರದಲ್ಲಿ ಹಾದುಹೋಗುವುದರಿಂದ ಬಸ್ ಸ್ಟ್ಯಾಂಡ್ ಸಮೀಪವಿರುವ ನಮ್ಮ ಜ್ಯೂಸ್ ಸೆಂಟರ್ಗೆ ಬೇಸಿಗೆಯ ಬೇಗೆಯ ತೃಷೆ ತಣಿಸಲು  ಬರುತ್ತಾರೆ. ಹಾಗಾಗಿ 50 ವರ್ಷಗಳಿಂದ ಅಂಗಡಿಯನ್ನಿಟ್ಟು ಜೀವನ ಸಾಗಿಸಲು ಸಾಧ್ಯವಾಯಿತು. ನಮಗೆ ಖಾಯಂ ಗ್ರಾಹಕರು ಎಂದು ಯಾರೂ ಇರುವುದಿಲ್ಲ. ಹಾಗಾಗಿ ಇಷ್ಟೇ ವ್ಯಾಪಾರವಾಗುತ್ತದೆ ಎಂದು ಕರಾರುವಕ್ಕಾಗಿ ಲೆಕ್ಕಾಚಾರ ಹಾಕುವುದು ಅಸಾಧ್ಯ. ಬೇಸಿಗೆಯಲ್ಲಿ ದಿನ ಖರ್ಚುಗಾಗುವಷ್ಟು ವ್ಯಾಪಾರವಾಗಿ ಮಿಕ್ಕಿ ಲಾಭವಾಗುತ್ತದೆ. ಎನ್ನುತ್ತಾರೆ ಮೀರಾ ಶೆಣೈ.
ತಾನು ಅಬಲೆಯಲ್ಲ ಸಬಲೆ ಎಂದು ಸ್ವಾವಲಂಬಿಯಾಗಿ ತನ್ನ ಕಬ್ಬಿನ ಸೆಂಟರ್ನಿಂದ ಸಾಬೀತು ಪಡಿಸಿ ತನ್ನ ಜೊತೆ ತನ್ನ ಮಕ್ಕಳಿಗೂ ಸುಂದರ ಭವಿಷ್ಯ ರೂಪಿಸಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಹತ್ತಿದ್ದಾರೆ. ಮೀರ ಅವರ ಸ್ವಾವಲಂಬಿ ಬದುಕು ಎಲ್ಲರಿಗೂ ಮಾದರಿ.
  • ಚಂದ್ರಶೇಖರ್ ಎಸ್ ಅಂತರ

0 comments:

Post a Comment

Share The Posts

Twitter Delicious Facebook Digg Stumbleupon Favorites More