Thursday 8 November 2012

ಕತ್ತರಿ ಸಾಣೆಗರರ ಬದುಕು ಅಡಕತ್ತರಿಯಲ್ಲಿ

ಕೆಲ ವರ್ಷಗಳ ಹಿಂದೆ ಸ್ವ ಉದ್ಯೋಗ ನಡೆಸುವವರಿಗೆ ಕತ್ತರಿ ಸಾಣೆಯೂ ಒಂದು ಆಯ್ಕೆ. ಕತ್ತರಿ ಸಾಣೆ ಕಾಯಕ ಮೂಲಕ ಜೀವನ ಸಾಗಿಸುತ್ತಿದ್ದರು ಅದೆಷ್ಟೋ ಮಂದಿ. ಆದರೆ ಈಗ ಆ ಉದ್ಯೋಗ ಕ್ಷೀಣಿಸುತ್ತಿದ್ದು ಅಲ್ಲಲ್ಲಿ ಕೆಲ ಮಂದಿ ಇನ್ನೂ ಇದನ್ನೇ ನೆಚ್ಚಿ ಕೊಂಡಿದ್ದಾರೆ. ಆದರೆ ಅವರ ಜೀವನಕ್ಕೇ ಕತ್ತರಿ ಸಾಣೆ ಕಾಯಕ ಈಗ ಸಂಚಕಾರವಾಗಿದೆ.
ಈಗಿನ ಜನರದು ವೇಗದ ಬದುಕು. ಏನಿದ್ದರೂ ಬಳಸಿ ಬಿಸಾಡುವ ವಿಚಾರ ಧಾರೆ. ಪುನರ್ಬಳಕೆಯ ಕುರಿತಾದ ಯೋಚನೆ ಜನರ ಮನದಲ್ಲಿಲ್ಲ. ಹಾಗಾಗಿ ಕತ್ತರಿ ಸಾಣೆ ಮಾಡುವ ಗೋಜಿಗೆ ಯಾರೊಬ್ಬರೂ ಹೋಗುವುದಿಲ್ಲ. ಹರಿತ ಕಳೆದುಕೊಂಡ ಕತ್ತರಿ ಬಿಸಾಡಿ ಹೊಸದನ್ನು ಖರೀದಿಸುತ್ತಾರೆ. ಹೆಚ್ಚಿನ ಎಲ್ಲಾ ವಸ್ತುಗಳಿಗೂ ಇದೇ ಪರಿಪಾಠ.
ಕತ್ತರಿ ಸಾಣೆಗರರು  ಸಿಗುವುದೇ ಅಪರೂಪ. ಮರುಭೂಮಿಯಲ್ಲಿ ನೀರು ಸಿಕ್ಕಂತೆ. ಸಿಕ್ಕರೆ ಅವರಲ್ಲಿ ಮಾತನಾಡಿಸಿದರೆ, ಅವರ ಜೀವನದ ಬವಣೆ ಕುರಿತು ಕೇಳಿದರೆ ಎಂಥಾ ಕಲ್ಲು ಹೃದಯಿಯೂ ಭಾವುಕನಾಗಬಹುದು. ಅವರ ತುತ್ತಿನ ಚೀಲಕ್ಕೆ ಕತ್ತರಿಯಾಗಿ ಮಾರವಕವಾಗಿದೆ ಅವರ ಕಾಯಕ.
ನನಗೆ ವಿದ್ಯೆ ಹತ್ತಲಿಲ್ಲ, ಬೇರೆ ಉದ್ಯೋಗ ಅಷ್ಟೊಂದು ಗೊತ್ತಲ್ಲ. ಕತ್ತರಿ ಸಾಣೆ ಮಾಡುತ್ತಾ ಜೀವನ ಸಾಗಿಸುತ್ತಿದ್ದೆನೆ. ಕೆಲ ವರ್ಷಗಳ ಹಿಂದೆ ಕತ್ತರಿ ಸಾಣೆ ಮಾಡಿಸುವವರ ಸಂಖ್ಯೆ ಹೆಚ್ಚಿತ್ತು. ನನಗೂ ಈ ಕಾಯಕದಲ್ಲಿ ಉತ್ತಮ ಲಾಭ ದೊರೆಯುತ್ತಿತ್ತು. ಆದರೀಗ ಕಡಿಮೆ ದರದಲ್ಲಿ ಕತ್ತರಿ ಸಾಣೆ ಮಾಡುತ್ತೇವೆ ಎಂದರೂ ಯಾರೂ ನಮ್ಮತ್ತ ಸುಳಿಯುತ್ತಿಲ್ಲ. ಕೆಲ ಸೆಲೂನ್ನವರು, ಗೂಡಂಗಡಿಯವರು ಕತ್ತರಿ ಸಾಣೆ ಮಾಡಿಸಿಕೊಳ್ಳುತ್ತಿದ್ದಾರೆ. ಆ ದಿನದ ಗಳಿಕೆ ಆದಿನಕ್ಕೆ ಮಾತ್ರ. ಉಳಿಕೆ ಮಾಡಲು ಅಸಾಧ್ಯವಾಗಿದೆ. ದಿನದ ಖರ್ಚನ್ನು ಗಳಿಸಲು ಸಾಧ್ಯವಾಗದ ದಿನಗಳಿವೆ ಎಂದು ಕತ್ತರಿ ಸಾಣೆ ಕಾಯಕದಲ್ಲಿ ತೊಡಗಿಕೊಂಡಿರುವ ಹೆಸರು ಹೇಳಲಿಚ್ಛಿಸದ ಒರ್ವ ತಿಳಿಸುತ್ತಾರೆ.
ಕತ್ತರಿ ಸಾಣೆ ಕಾರ್ಯ ಸುಲಭದ ಮಾತಲ್ಲ. ಕಾಲಿನಿಂದ ಯಂತ್ರದ ಮೆಟ್ಟನ್ನು ತುಳಿದು ಚಕ್ರವನ್ನು ತಿರುಗಿಸಬೇಕು. ಹೆಚ್ಚಿನ ಶ್ರಮ ಅಗತ್ಯ. ಕಾಲಿನಿಂದ ತುಳಿದು ಚಕ್ರ ತಿರುಗಿಸುವುದರಿಂದ ಕಾಲಿನ ಗಂಟುಗಳ ನೋವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಇದು ಮಾರಕವಾಗಿ ತಡೆಯಲಸಾಧ್ಯ ನೋವು ಉಂಟಾಗಿ ಉದ್ಯೋಗವನ್ನು ಮೊಟಕುಗೊಳಿಸ ಬೇಕಾಗಿ ಬಂದ ನಿದರ್ಶನಗಳಿವೆ. ಕೆಲಸ ಎಷ್ಟೇ ಕಷ್ಟವಾದರೂ ಸಂಸಾರ ನಿಭಾಯಿಸಲು, ಮಕ್ಕಳ ಭವಿಷ್ಯಕ್ಕಾಗಿ ಈ ಕಾಯಕವನ್ನು ಮುಂದುವರಿಸುತ್ತಿದ್ದೇನೆ. ಎನ್ನುತ್ತಾರೆ ಅವರು.
ಸ್ವ ಉದ್ಯೋಗಿಗಳ ಜೀವನದ ಅಂಗದಂತಿದ್ದ ಕತ್ತರಿ ಸಾಣೆಯ ಯಂತ್ರ ನನೆಗುದಿಗೆ ಬಿದ್ದಿದೆ. ಹೊಟ್ಟೆಗೆ ಹಿಟ್ಟು ನೀಡುತ್ತಿದ್ದ ಕತ್ತರಿ ಸಾಣೆ ಕಾಯಕ ಹೊಟ್ಟೆಯನ್ನು ಬರಿದಾಗಿಸುತ್ತಿದೆ. ಇವೆಲ್ಲದರ ನಡುವೆ ಆತ್ಮವಿಶ್ವಾಸ ಕಳೆದುಕೊಳ್ಳದೆ ಅದೇ ಕಾಯಕದಲ್ಲಿ ತೊಡಗಿರುವ ಜೀವಗಳ ಬದುಕು ದುಸ್ತರವಾಗದಿರಲಿ ಎನ್ನುವುದು ನಮ್ಮ ಆಶಯ.
  • ಚಂದ್ರಶೇಖರ ಎಸ್ ಅಂತರ


1 comments:

Nice write up really heart touching...

Post a Comment

Share The Posts

Twitter Delicious Facebook Digg Stumbleupon Favorites More