ಸಾವಿರ ಯಕ್ಷಗಾನ ಪುಸ್ತಕಗಳ ಸರದಾರ

ಮಂಜುನಾಥ್ ಭಟ್

ಪ್ರಕೃತಿಯ ಮಡಿಲಲ್ಲಿ ತರಗತಿಗಳ ತೋರಣ;

ವಿದ್ಯಾರ್ಥಿಗಳೂ 100 ಶೇಕಡ ಹಾಜರು ಖಚಿತ

ಮಾಯಾ ಲೋಕದ ಕಿನ್ನರಿ!

ಜಾದೂ ಪ್ರವೀಣೆ ಉಜಿರೆಯ ರಕ್ಷಾ ನಾಯಕ್ .

ಕೃಷಿಗೂ ಬಂತು ವಲಸೆಯ ಖುಷಿ

ಅಡಿಕೆ ತೋಟದಲ್ಲಿ ವಲಸೆ ಕಾರ್ಮಿಕರು

ಜಾತ್ರೆಯ ಜಂಗುಳಿಯೊಳಗೆ.....!

ತುಳು ನಾಡ ಸಂಸ್ಕೃತಿ ಬಿಂಬಿಸುವ ಜಾತ್ರ್ಯೋತ್ಸವ

Tuesday 22 January 2013

ಮಾಯಾ ಲೋಕದ ಕಿನ್ನರಿ


ಅದೊಂದು ಜಾದೂ ಪ್ರದರ್ಶನದ ವೇದಿಕೆ. ಮಹಿಳೆಯೊಬ್ಬರು ನಗು ಬೀರುತ್ತಾ ಕಪ್ಪು ಮ್ಯಾಜಿಕ್ ಟೋಪಿ ಹೂಗುಚ್ಛ ಹಿಡಿದುಕೊಂಡು ತೆರೆ ಮೇಲೆ ಬಂದರು. ಹೂವುಗಳನ್ನು ಆಘ್ರಾಣಿಸಿ ದುರ್ವಾಸನೆ ಬೀರುತ್ತಿದೆ ಎಂದು ಗುಚ್ಛದಲ್ಲಿದ್ದ ಹೂವುಗಳನ್ನೆಲ್ಲಾ ಕಿತ್ತು ತಾನು ತಂದಿದ್ದ ಜಾದು ಬಟ್ಟೆಯಲ್ಲಿ ಬರಿದಾದ ಗುಚ್ಛವನ್ನು ಮುಚ್ಚಿಟ್ಟರು. ಮಂತ್ರ ಪಠಿಸಿ ಜಾದೂ ಬಟ್ಟೆ ಸರಿಸಿದಾಗ ಸುಗಂಧ ಪರಿಮಳ ಬೀರುವ ಬಣ್ಣ ಬಣ್ಣದ ಹೂವುಗಳು ಪ್ರತ್ಯಕ್ಷವಾದವು. ಹೀಗೆ ಸುಮಾರು ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನು ಮಾಯಾಲೋಕಕ್ಕೆ ಕೊಂಡೊಯ್ದು ಸಭೀಕರ ಕಣ್ಣಿಗೆ ಕಟ್ಟುವಂತೆ ಲೀಲಾಜಾಲವಾಗಿ ಜಾದೂ ಪ್ರದರ್ಶಿಸಿದರು.
ತನ್ನ ಜಾದೂ ತಂತ್ರಾರಿಕೆಯಿಂದ ಎಲ್ಲರನ್ನೂ ಸಂಮೋಹನಗೊಳಿಸಿ, ಮಾಯಾ ಲೋಕದ ಬಲೆ ಬೀಸಿದವರು ಜಾದೂ ಪ್ರವೀಣೆ ಉಜಿರೆಯ ರಕ್ಷಾ ನಾಯಕ್.
ಸಣ್ಣ ವಯಸ್ಸಿನಲ್ಲೇ ಜಾದೂ ಪ್ರದರ್ಶನಗಳನ್ನು ನೋಡಿ, ಅದರ ತಂತ್ರಗಾರಿಕೆ ಕಲೆಗೆ ಮನಸೋತು ತಾನೂ ಜಾದೂಗಾರ್ತಿಯಾಗಬೇಕೆಂದು ಕನಸು ಕಂಡರು. ಜಾದೂ ಕುರಿತಾದ ಪುಸ್ತಕಗಳನ್ನು ಓದಿ ತಾನ್ನ 11ನೇ ವಯಸ್ಸಿನಲ್ಲೇ ಅಂಜಿಕೆ ಪಡದೆ ವೇದಿಕೆ ಏರಿ ಜಾದೂಗಳನ್ನು ಪ್ರದರ್ಶಿಸಿದರು. ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡವರು ರಕ್ಷಾ ನಾಯಕ್.
ಐದನೇ ತರಗತಿಯ ರಜೆಯಲ್ಲಿ ಕೇರಳದಲ್ಲಿರುವ ಚಿಕ್ಕಪ್ಪನ ಮನೆಗೆ ಹೋಗಿದ್ದೆ. ಅಲ್ಲಿಯ ಜಾದೂ ಪ್ರದರ್ಶನ ಕಂಡು ಜಾದೂ ಪ್ರವೀಣೆಯಾಗಬೇಕೆಂದು ಪಣತೊಟ್ಟೆ. ನನ್ನ ಆಸೆ ಅರಿತ ಚಿಕ್ಕಪ್ಪ ಕೆಲ ಜಾದೂ ಪರಿಕರಗಳನ್ನು ತಂದು ಕೊಟ್ಟರು. 6ನೇ ತರಗತಿಯಲ್ಲಿರುವಾಗ ಕುದ್ರೋಳಿ ಗಣೇಶ್ ರ ಮೂರು ದಿವಸದ ಜಾದೂ ಕಲಿಕೆಯ ಶಿಬಿರಕ್ಕೆ ತೆರಳಿ ಸಕಷ್ಟು ಕಲಿತೆ. ನಂತರ ಬೆಳ್ತಂಗಡಿ ಉಜಿರೆ ಧರ್ಮಸ್ಥಳ ಆಸು ಪಾಸು ಗಣೇಶೋತ್ಸವ, ಲಕ್ಷಾದೀಪೋತ್ಸವ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಜಾದು ಮಾಡಲು ಪ್ರಾರಂಭಿಸಿದೆ ಎಂದು ತನ್ನ ಮಾಯಾ ಲೋಕದ ಪಯಣದ ಕುರಿತು ನೆನಪಿಸಿಕೊಳ್ಳುತ್ತಾರೆ ರಕ್ಷಾ.
ರಕ್ಷಾ ಸ್ವಆಸಕ್ತಿ ಪರಿಶ್ರಮದಿಂದ ಜಾದು ವಿದ್ಯೆ ಕಲಿತರು. ಮೊದಮೊದಲು ವೇದಿಕೆಗಳಲ್ಲಿ 15 ನಿಮಿಷಗಳ ಪ್ರದರ್ಶನ ನೀಡುತ್ತಿದ್ದ ಅವರು ಈಗ 2 ಗಂಟೆಗಳ ಹೊತ್ತು ಲೀಲಾಜಾಲವಾಗಿ ಮಾಯಾಲೋಕದಲ್ಲಿ ವೀಕ್ಷಕರನ್ನು ತೇಲಿಸುವಷ್ಟು ಕೌಶಲ್ಯ ಹೊಂದಿದ್ದಾರೆ. ಸುಮಾರು ನೂರು ವೇದಿಕೆಗಳಲ್ಲಿ ಅವರ ಇಂದ್ರಜಾಲ ಕಸರತ್ತುಗಳು ಪ್ರದರ್ಶನವಾಗಿದೆ. ಅವರ ಜಾದು ಪಯಣಕ್ಕೆ 15 ವರ್ಷಗಳು ತುಂಬಿವೆ.
ವಿದ್ಯಾರ್ಥಿ  ದೆಸೆಯಲ್ಲಿ ಓದಿನಲ್ಲೂ ಮುಂದಿದ್ದ ರಕ್ಷಾ ನಾಯಕ್ ಉಜಿರೆ ಎಸ್. ಡಿ.ಎಂ ಕಾಲೇಜಿನಲ್ಲಿ ಬಿ.ಎ.ಸ್ಸಿ. ಪದವಿ ವ್ಯಾಸಂಗ ಮಾಡುತ್ತಿದ್ದಾಗ ವಿಜ್ಞಾನದ ವಿಷಯದಡಿ ತಾನು ರೂಪಿಸಿದ ಒಂದು ಯೋಜನೆಗೆ (2006)ಯುವ ವಿಜ್ಞಾನಿ ಎಂಬ ಬಿರುದನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ನೀಡಿತ್ತು.
ನನ್ನ ಸಾಧನೆಗೆ ತಂದೆ-ತಾಯಿ ರತ್ನಾಕರ ಪ್ರಭು ಮತ್ತು ರೇಖಾ ಪ್ರಭುರ ಪ್ರೋತ್ಸಾಹ ಕಾರಣ. ಜಾದೂ ಲೋಕದ ಯಶಸ್ಸಿಗೆ ಕುದ್ರೋಳಿ ಗಣೇಶ್ ಸ್ಪೂರ್ತಿ  ಎನ್ನುತ್ತಾರೆ. ಪ್ರಸ್ತುತ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ರಕ್ಷಾ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದಾರೆ. 3 ವರುಷದ ಹೆಣ್ಣು ಮಗುವಿನ ಅಮ್ಮನಾಗಿ ಜಾದೂ ಲೋಕದ ನಂಟನ್ನು ಕಳೆದುಕೊಳ್ಳಲು ಇಷ್ಟವಿಲ್ಲದೆ ಜಾದೂ ವೃತ್ತಿಯನ್ನು ಮುಂದುವರಿಸಿದ್ದಾರೆ. ಗಂಡನ ಬೆಂಬಲವೂ ಅವರಿಗಿದೆ. ಬಿಡುವಿನಲ್ಲಿ ಮಂಗಳೂರು ಉಜಿರೆ ಧರ್ಮಸ್ಥಳ ಸುತ್ತಮತ್ತಲಿನ ಪ್ರದೇಶದಲ್ಲಿ ಹೆಚ್ಚಾಗಿ ಜಾದೂ ಪ್ರದರ್ಶನಗಳನ್ನು ರಕ್ಷಾ ನೀಡುತ್ತಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಮಹಿಳೆಯರು ಜಾದೂ ವೃತ್ತಿಯನ್ನು ಕೈಬಿಡುತ್ತಾರೆ.. ಕರ್ನಾಟಕದಲ್ಲಿ ಕೇವಲ ಆರು ಮಹಿಳೆಯರು ಮಾತ್ರ ಮದುವೆಯ ಬಳಿಕವೂ ಜಾದು ಹವ್ಯಾಸ ಮುಂದುವರಿಸಿದ್ದಾರೆ. ಜಾದೂಗಾರರಾಗಲು ಬಯಸುವ ಮಹಿಳೆಯರಿಗೆ ಅವರ ಕೌಶಲ್ಯ ಕ್ರಿಯಾಶೀಲತೆಯನ್ನು ವಿಕಸನಗೊಳಿಸಲು ಸೂಕ್ತ ವೇದಿಕೆ ಲಭಿಸಬೇಕಿದೆ ಜಾದೂ ಕಲಿಯುವ ಆಸಕ್ತಿ ಇರುವ ಮಹಿಳೆಯರಿಗೆ ಮನೆಯಲ್ಲಿ ಜಾದೂ ಕಲಿಸುತ್ತಿದ್ದೇನೆ ಎನ್ನುತ್ತಾರೆ ರಕ್ಷಾ. ದೂರವಾಣಿ ಸಂಖ್ಯೆ. 99*5**82*4         - ಚಂದ್ರಶೇಖರ್ ಎಸ್ ಅಂತರ.

Saturday 12 January 2013

ಕೃಷಿಗೂ ಬಂತು ವಲಸೆಯ ಖುಷಿ

ಅಡಿಕೆ ತೋಟದಲ್ಲಿ ವಲಸೆ ಕಾರ್ಮಿಕರು 
ಹಿಂದೆ ಕಾಂಕ್ರೀಟ್ ಹಾಕಲು, ಡಾಂಬರು ಹಾಕಲು ರಸ್ತೆ ಕಾಮಗಾರಿಗೆ ಜನರು ಘಟ್ಟ ಪ್ರದೇಶದಿಂದ ವಲಸೆ ಬರುತ್ತಿದ್ದರು. ಆದರೆ ಈಗ ಅಲ್ಲಿಯ ಜನರು ಬಯಲು ಸೀಮೆಯ ಹೆಕ್ಟರ್ಗಟ್ಟಲೆ ಕೃಷಿಯ ಜೊತೆಗೆ ಕರಾವಳಿಯ ಸೆಂಟ್ಸ್ಗಟ್ಟಲೆ ಜಾಗದ ಕೃಷಿಯೆಡೆಗೆ ಕಣ್ಣ ಹಾಯಿಸಿದ್ದಾರೆ. ದೂರದೂರಿಂದ ಬಂದು ಕರಾವಳಿ ಮಣ್ಣಲ್ಲಿ ಬೆವರು ಹರಿಸಿ ಇಲ್ಲಿಯ ಅಡಿಕೆ ಕೃಷಿಗೆ ಜೀವ ತುಂಬುತ್ತಿದ್ದಾರೆ.
ಅದು ಕೆಲ ವರ್ಷಗಳ ಹಿಂದಿನ ದೃಶ್ಯ, ಎಲ್ಲಿ ನೋಡಿದರಲ್ಲಿ ಬುಟ್ಟಿ, ಪಿಕ್ಕಾಸು ಹಿಡಿದುಕೊಂಡು ಜನರು ತೋಟಗಾರಿಕೆ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕರಾವಳಿಯಾದ್ಯಂತ ಅಡಿಕಡ ಕೃಷಿ ಭರದಿಂದ ಸಾಗುತ್ತಿತ್ತು. ಅಡಿಕೆ ತೋಟಕ್ಕೆ ಮಣ್ಣು ಹಾಕಲು, ಗೊಬ್ಬರ ಹಾಕಲು ಹೀಗೆ ಎಲ್ಲಾ ಕೆಲಸಕ್ಕೂ ಕೆಲಸಗಾರರು ಯಥೇಚ್ಛವಾಗಿ ಸಿಗುತ್ತಿದ್ದರು. ಕರಾವಳಿಯ ಕೃಷಿಕರಿಗೆ, ಕೃಷಿ ಕಾರ್ಮಿಕರಿಗೆ ಅಡಿಕೆ ತೋಟಗಾರಿಕೆ ಜೀವಾಳವಾಗಿತ್ತು. ಆದರೆ ಈಗಿನ ವಾಸ್ತವ ಪರಿಸ್ಥಿತಿ ತೀರ ವ್ಯತಿರಿಕ್ತವಾಗಿದೆ. ಬೆವರು ಹರಿಸಿ ಡುಡಿಯುವುದಕ್ಕೆ ಜನರು ಒಲ್ಲೆ ಎನ್ನುತ್ತಿದ್ದಾರೆ. ಅಡಿಕೆ ಕೃಷಿಗೂ ವಲಸೆಯ ಬಣ್ಣ ಲೇಪಿದೆ.
ದಾವಣಗೆರೆ, ಶಿವಮೊಗ್ಗ, ಬೆಳಗಾವಿ ಹೀಗೆ ಬಯಲು ಸೀಮೆಯ ಬಿಸಿಲು ನಾಡಿನ ಜನರು ಕರಾವಳಿಯೆಡೆಗೆ ತಂಡೋಪತಂಡವಾಗಿ ವಲಸೆ ಬರುತ್ತಿದ್ದಾರೆ. ಇಲ್ಲಿಯ ಅಡಿಕೆ, ರಬ್ಬರ್ ಕೃಷಿ ಕೆಲಸಗಳನ್ನು ಕಾಂಟ್ರ್ಯಾಕ್ಟ್ ವಹಿಸಿಕೊಳ್ಳುತ್ತಿದ್ದಾರೆ.  ಕಂಗು ತೆಂಗುಗಳ ಬುಡ ಬಿಡಿಸುವುದು, ಮಣ್ಣು ಹಾಕುವುದು, ಗೊಬ್ಬರ ಹಾಕುವುದು, ಸಸಿ ನೆಡುವುದು ಹೀಗೆ ತೋಟಗಾರಿಕೆಯ ಪ್ರತಿಯೊಂದು ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಒಂದೊಂದು ತಂಡದಲ್ಲೂ ಸುಮಾರು 40 ರಿಂದ 50 ಮಂದಿ ಇರುತ್ತಾರೆ. ಅದಕ್ಕೊಬ್ಬ ಮೇಸ್ತ್ರಿ [ಮುಖ್ಯಸ್ಥ] ಇರುತ್ತಾರೆ. ವಿವಿಧೆಡೆ ಏಕಕಾಲಕ್ಕೆ ಕೆಲಸವನ್ನು ವಹಿಸಿಕೊಂಡು ತಂಡವನ್ನು ಗುಂಪಗಳನ್ನಾಗಿ ವಿಂಗಡಿಸಿ ಆಯಾಯ ಕೆಲಸಗಳನ್ನು ನಿರ್ವಹಿಸಲು ವಿವಿಧೆಡೆಗೆ ಕಳಿಸಿಕೊಡುವ ಜವಾಬ್ದಾರಿ ಮೇಸ್ತ್ರಿಯದ್ದು. ಕಂಗು ಲೆಕ್ಕ, ಜಾಗದ ವಿಸ್ತೀರ್ಣಕ್ಕೆ ಹೊಂದುಕೊಂಡು ಜನರನ್ನು ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಎಕ್ಕರೆಗಟ್ಟಲೆ ಜಾಗವಿದ್ದಲ್ಲಿ ಅಲ್ಲಿಗೆ ಜಾಸ್ತಿ ಕೆಲಸಗಾರರನ್ನು ಹೊಂದಿಸಿ ಸಣ್ಣ ಸೆಂಟ್ಸ್ ತೋಟದ ಕೆಲಸಗಳಿಗೆ, ಕೆಲಸಕ್ಕೆ ಹೊಂದುವಂತೆ ಕೆಲಸಗಾರರ ಗುಂಪುಗಳನ್ನು ತಯಾರಿಸುತ್ತಾರೆ.
ನಾನು ದಾವಣಗೆರೆಯವನು ಸುಮಾರು 6-7 ವರ್ಷಗಳಿಂದ ಕರಾವಳಿಯಲ್ಲಿ ಕೃಷಿ ಕೆಲಸಗಳನ್ನು ಮಾಡುತ್ತಿದ್ದೇನೆ. ನಮ್ಮದು 50 ಜನರ ತಂಡವಾಗಿದೆ. ಕೆಲಸಗಳನ್ನು ಕಾಂಟ್ರ್ಯಾಕ್ಟ್ ವಹಿಸಿಕೊಂಡು ಸಂಬಳ ಮಾತನಾಡಿ ನಮ್ಮ ತಂಡವನ್ನು ಅಲ್ಲಿಗೆ ಕಳುಹಿಸುವ ಜವಾಬ್ದಾರಿ ನನ್ನದು. ನಾವು ಹಣವನ್ನು ಸಮಾನವಾಗಿ ಹಂಚಿಕೊಳ್ಳುತ್ತೇವೆ. ಹಣ ಹಂಚಿಕೆಯ ವಿಚಾರದಲ್ಲಿ ಲಿಂಗ ತಾರತಮ್ಯ ಮಾಡುವುದಿಲ್ಲ. ಕಾಯಕವೇ ನಮ್ಮ ದೇವರು. ಎನ್ನುತ್ತಾರೆ ತಂಡದ ಮೇಸ್ತ್ರಿ ಆರ್ ಟಿ ಪಾಪಣ್ಣ.
ಮುಂಜಾನೆ ಎಳು ಗಂಟೆಯಿಂದ ಸಂಜೆ 4.00ರ ವರೆಗೆ ಅವರ ಕೆಲಸದ ಸಮಯ. ಮಧ್ಯಾಹ್ನದ ಊಟದ ಬಿಡುವೆಂದು ಕಾಲು-ಅರ್ಧ ಗಂಟೆಯಷ್ಟು ವಿರಾಮ ಬಿಟ್ಟರೆ ಅವರದು ನಿರಂತರ ಕೆಲಸ. ಕೆಲಸವನ್ನು ಕಾಂಟ್ರ್ಯಾಕ್ಟ್ ವಹಿಸಿಕೊಳ್ಳುವುದರಿಂದ ಊಟ ತಿಂಡು ಎಲ್ಲವನ್ನೂ ಅವರೇ ತಯಾರಿಸಿ ಕೊಳ್ಳುತ್ತಾರೆ. ವಾಸಕ್ಕೆ ಅವರದೇ ಟೆಂಟ್ ಕಟ್ಟಿಕೊಳ್ಳುತ್ತಾರೆ. ಕೆಲಸದ ವಿಚಾರದಲ್ಲಿ 'ಆಳಿದ್ದ ಮನೆಯಲ್ಲಿ ದೂಳಿಲ್ಲ' ಎಂಬಂತೆ ಅಷ್ಟೊಂದು ನಿಷ್ಠೆಯಿಂದ ನಿರ್ವಹಿಸುತ್ತಾರೆ.
ಇಲ್ಲಿ ಕೆಲಸಕ್ಕೆ ಜನ ಸಿಗುವುದಿಲ್ಲ ಹಾಗಾಗಿ ಘಟ್ಟದಿಂದ ಜನರನ್ನು ಕರೆಸಿ ಕೆಲಸ ಮಾಡಿಸುವ ಪರಿಸ್ಥಿತಿ ಒದಗಿದೆ. ಅವರ ಕೆಲಸವನ್ನು ನಾವು ಮೆಚ್ಚಲೇ ಬೇಕು. ಕಾಂಟ್ರ್ಯಾಕ್ಟ್ ಕೆಲಸಕ್ಕೆ ನೀಡುವ ಹಣಕ್ಕೇನು ಮೋಸವಾಗದ ಹಾಗೆ ಕೆಲಸ ನಿರ್ವಹಿಸುತ್ತಾರೆ. ಅವರ ಶ್ರಮ, ಕೆಲಸದ ವೈಖರಿ ಕಂಡಾಗ ಇನ್ನೂ ನೂರು ರುಪಾಯಿ ಹೆಚ್ಚು ಕೊಡುವ ಅನಿಸುತ್ತದೆ. ಅಷ್ಟು ವೇಗ ಮತ್ತು ನಿಷ್ಠೆಯ ಕೆಲಸ ಅವರದು ಎನ್ನುತ್ತಾರೆ ಮಾಲಾಡಿಯ ತೆಂಗು ಕೃಷಿಕ ರಾಘವೇಂದ್ರ.
ಕರಾವಳಿಯಾದ್ಯಂತ ಇಂತಹ ಅನೇಕ ಬಯಲು ಸೀಮೆಯ ತಂಡಗಳನ್ನು ನಾವು ಕಾಣಬಹುದಾಗಿದೆ. ಇಲ್ಲಿಯ ಕೃಷಿಗೆ ಬಯಲು ಸೀಮೆಯ ಕಂಪು ಹರಡಿದೆ. ಆರ್ ಟಿ ಪಾಪಣ್ಣ ರನ್ನು. ಸಂಪರ್ಕಿಸಿ 9945903260

-ಚಂದ್ರಶೇಖರ್ ಎಸ್ ಅಂತರ

Monday 7 January 2013

ಜಾತ್ರೆಯ ಜಂಗುಳಿಯೊಳಗೆ.....!

ಸಾಲುಗಟ್ಟಲೆ ವೈವಿದ್ಯತೆಯ ಅಂಗಡಿ ಮುಂಗಟ್ಟುಗಳು, ಜನರ ನೂಕುನುಗ್ಗಲು ಥರ ಥರದ ವೇಷಭೂಷಣಗಳು ಗೌಜಿಗದ್ದಲ ಇವೆಲ್ಲ ಕಾಣಸಿಗುವುದು ಕರಾವಳಿಯ ಜಾತ್ರೆಗಳ ಸಂತೆಗಳಲ್ಲಿ... ಹೌದು ಇದು ಸಂತೆ ಜಾತ್ರೆಗಳ ಸಮಯ. ಜನಜಂಗುಳಿಯ ಮೇಳ. ಮೈಕ್ ಬ್ಯಾಂಡ್ ಸೆಟ್, ಚೆಂಡೆ, ವಾದ್ಯಗಳ ನಾದದ ಕಲರವ, ತುಳು ನಾಡ ಸಂಸ್ಕೃತಿ ಬಿಂಬಿಸುವ ಜಾತ್ರ್ಯೋತ್ಸವದ ಪರ್ವ ಕಾಲ.
ನಾಗರಪಂಚಮಿಯಂದು ಕವಲೊಡೆದು ದಸರಾ ಸಂದರ್ಭದಲ್ಲಿ ಚಿಗುರು ಪಡೆದು ಹೊಸ ವರುಷದ ಹೊಸ್ತಿಲಲಿ ಕರಾವಳಿಯ ಉದ್ದಗಲಕ್ಕೂ ಹಬ್ಬುವ ಹಬ್ಬ ಉತ್ಸವಗಳು ತುಳುನಾಡ ಶ್ರೀಮಂತ ಸಂಸ್ಕೃತಿಯ ಪ್ರತಿಬಿಂಬ. ಪತ್ತನಾಜೆಯಿಂದ ನಾಗರ ಪಂಚಮಿಯವರೆಗೆ ಜಾತ್ರೆಗಳಿಗೆ ವಿರಾಮ. ನಾಗರ ಪಂಚಮಿ ಕಳೆಯುತ್ತಲೇ ತುಳುನಾಡ ಹಬ್ಬಗಳಿಗೆ ಬಿಡುವಿಲ್ಲ. ದೀಪಾವಳಿ ಕಳೆದು ಲಕ್ಷದೀಪೋತ್ಸವಗಳು ಮುಗಿದ ಬಳಿಕ ಪತ್ತನಾಜೆವರೆಗೂ ಸಂಭ್ರಮವೋ ಸಂಭ್ರಮ. ಜಾತ್ರೆಗಳಿಗೆ ಧರ್ಮದ ಲೇಪವಿದ್ದರೂ, ಇದು ಒಗ್ಗಟ್ಟಿನ ಭೇದ-ಭಾವ ಮೆಟ್ಟಿನಿಲ್ಲುವ ಒಗ್ಗಟ್ಟಿನ ಪ್ರತೀಕಗಳು. 
ಜಾತ್ರೆ ಉತ್ಸವಗಳಲ್ಲಿ ಸಂತೆಗಳಿಲ್ಲದಿದ್ದರೆ ಹಬ್ಬದ ವಾತಾವರಣ ಸೃಷ್ಠಿಯಾಗುವುದಿಲ್ಲ. ಜಾತ್ರೆಗಳಿಗೆ ಸಂತೆಯೇ ಮೆರುಗು. ಪುಟ್ಟ ಮಕ್ಕಳಿನಿಂದ ಹಿಡಿದು ದೊಡ್ಡವರೂ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಲು ಸಂತೆಯೆಡೆ ಗುಂಪು ಗುಂಪಾಗಿ ದಪುಗಾಲು ಹಾಕಿ, ಚೌಕಾಸಿಗಾಗಿ ಮಾತಿಗಿಳಿದು ಅಂತೂ ಅಂದು ಕೊಂಡ ಬೆಲೆಗೆ ವಸ್ತುಗಳನ್ನು ಕೊಂಡುಕೊಂಡು ಪಡುವ ಆ ಖುಷಿ ಧನ್ಯತಾ ಭಾವ ಕಾಣ ಸಿಗುವುದು ಸಂತೆಯಲ್ಲಿ ಮಾತ್ರ. ಆ ಅನುಭವ ವರ್ಣಿಸಲಸಾಧ್ಯ.
ಮಕ್ಕಳು ಆಟಿಕೆಗಳ ಅಂಗಡಿಗಳೆದುರು ಅದು ಬೇಕು ಇದು ಬೇಕು ಎಲ್ಲವೂ ಬೇಕು...ಎಂಬ ಹಠ, ಪರ್ಸ್ನಲ್ಲಿ ಹಣ ಎಷ್ಟಿದೆ ಎಂದು ಗುಟ್ಟು ಬಲ್ಲ ತಾಯ್ತಂದೆ ಮಕ್ಕಳನ್ನು ಸಮಾಧಾನ ಪಡಿಸುವುದು.. ಮಕ್ಕಳು ಅಮ್ಮನೊಂದಿಗಿನ ಜಗಳವಾಡಿ ಚೀರಾಡುವುದು ಇಂತಹ ಗದ್ದಲ ಸಂತೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಸಂತೆ ಎಂದರೆ ಅಲ್ಲಿ ಎಲ್ಲವೂ ಸಿಗುತ್ತದೆ ಎಂಬ ನಂಬಿಕೆ ಗ್ರಾಮೀಣ ಜನರದ್ದು. ಇಲ್ಲಿ ಎಲ್ಲರಿಗೂ ಮುಕ್ತ ಸ್ವಾಗತ. ಮಕ್ಕಳಿಗೆ ಅಟಿಕೆಗಳು. ಸ್ತ್ರೀಯರಿಗೆ ಅಲಂಕಾರಿಕ ವಸ್ತುಗಳು, ಜ್ಯೂಸ್, ತಿನಿಸುಗಳು ಐಸ್ಕ್ರೀಮ್ಗಳು, ಪಡ್ಡೆ ಹುಡುಗರಿಗೆ ನೆಚ್ಚಿನ ತಾರೆಯರ ಫೋಟೋಗಳು, ವೃದ್ಧರಿಗೆ ಪುರಾಣದ ಪುಸ್ತಕಗಳು. ಹೀಗೆ ಆಯಾಯ ವಯಸ್ಸಿಗೆ ತಕ್ಕವುಗಳು ಸಂತೆಯಲ್ಲಿ ಲಭ್ಯ ಹಾಗಾಗಿ ಸಂತೆಗೆ ಹೋಗುವುದು ಎಂದರೆ ಎಲ್ಲರಿಗೂ ಪಂಚಪ್ರಾಣ. ಅದರಲ್ಲೂ ಮಹಿಳೆಯರಿಗಂತೂ ಊರಿನ ಜಾತ್ರೆಯ ಸಂತೆ ವರ್ಷದ ಶಾಪಿಂಗ್ ನ ಪರ್ವ ದಿನ
ಜಾತ್ರೆಯಲ್ಲಿ ಮಕ್ಕಳ ಅಟಿಕೆಗಳಿಗೆ, ಸ್ತ್ರೀ ಅಲಂಕಾರಿಕ ವಸ್ತುಗಳಿಗೆ ಹೆಚ್ಚಿನ ಬೇಡಿಕೆ. ಆ ವಸ್ತುಗಳ ಮುಂಗಟ್ಟುಗಳಿಗೆ ಹೆಚ್ಚಿನ ವ್ಯಾಪಾರವಾಗುತ್ತದೆ ಲಾಭಗಳಿಸುವ ವಿಚಾರದಲ್ಲಿ ಆಯಾಯ ಉತ್ಸವ ಜನಸಾಗರದ ಮೇಲೆ ಅವಲಂಬಿತವಾಗಿದೆ. ಒಂದೇ ಬಗೆಗಿನ ವಸ್ತುಗಳ ಅಂಗಡಿ ಮುಂಗಟ್ಟುಗಳು ಎಷ್ಟು ಸಂತೆಯಲ್ಲಿದೆ ಎನ್ನುವುದರ ಮೇಲೆಯೂ ಲಾಭದ ವಿಚಾರ ನಿಲ್ಲುತ್ತದೆ.
ಮಳೆಗಾಲದ ವೇಳೆ ಸಂತೆ ವ್ಯಾಪಾರಿಗಳಿಗೆ ವಿರಾಮ ಆಗ ಕೆಲವು ವ್ಯಾಪಾರಿಗಳು ಕೃಷಿಯಲ್ಲಿ ತೊಡಗಿಸಿಕೊಳ್ಳುವುದೂ ಉಂಟು. ಉತ್ಸವಗಳು ಪ್ರಾರಂಭವಾದ ಬಳಿಕ ಕೃಷಿಗೆ ಕೋಕ್. ಮಳೆಗಾಲ ವೇಳೆಗೆ ನೆನೆಗುದಿಗೆ ಬೀಳುವ ಸಂತೆಯ ಟೆಂಟ್ಗಳು ಹೊಸ ವರುಷದ ವೇಳೆ ಅಲ್ಲಲ್ಲಿ ಗರಿಗೆದರುತ್ತದೆ.
 ಎಲ್ಲೆಲ್ಲಿ ಜಾತ್ರೆಗಳು ಇರುತ್ತವೆ ಎಂಬ ಪಟ್ಟಿ ಈ ವ್ಯಾಪಾರಿಗಳಲ್ಲಿ ಮೊದಲೇ ಸಿದ್ಧ. ಜಾತ್ರೆಗೆ ಒಂದೆರಡು ದಿನ ಮೊದಲೇ ತೆರಳಿ ಮಳಿಗೆಗಳ ಜಾಗದ ಸುಂಕ ಪಾವತಿಸಿ ಸರಕು ಸರಂಜಾಮುಗಳೊಂದಿಗೆ ವ್ಯವಸ್ಥಿತವಾಗಿ ಜೋಡಿಸಿಡುತ್ತಾರೆ
ಸಂತೆಯ ಜನಜಂಗುಳಿ ಆಕರ್ಷಣೆ, ಜನರ ಭರಾಟೆ ತಪ್ಪಿಸಿಕೊಳ್ಳಲು ಯಾರೂ ಇಷ್ಟ ಪಡುವುದಿಲ್ಲ. ಕರಾವಳಿಯಲ್ಲಿ ಸಂತೆಗಳು ರೆಕ್ಕೆ ಬಿಚ್ಚುವ ಕಾಲ. ಜಾತ್ರೆಯ ಸಂತೆ ಸುತ್ತಾಡಿ ಆನಂದ ಪಡಲು ಇದು ಸಕಾಲ. 
-ಚಂದ್ರಶೇಖರ್ ಎಸ್ ಅಂತರ

Tuesday 1 January 2013

ನವ ವರುಷ ನೀಡಲಿ ಬದುಕಿಗೆ ಹೊಸ ಸ್ಪರ್ಶ

2012 ಸರಿಯಿತು 2013 ಆಗಮನವಾಯಿತು.  ಹೀಗೆ ಯಾವುದೂ ಶಾಶ್ವತವಲ್ಲ. ಬದಲಾವಣೆ ಜಗದ ನಿಯಮ. ಜಗತ್ತಿನ ಕಾಲ ಚಕ್ರ ಅತಿ ವೇಗವಾಗಿ ಉರುಳುತ್ತಿದೆ. ಸಿಹಿ ಕಹಿಗಳ ಸುದ್ದಿಯ ನಡುವೆ ಜನರ ಜೀವನ ಸಾಗುತ್ತಿದೆ. ನಾಡಿನಲ್ಲಿ ಅತಂತ್ರ ರಾಜಕೀಯ, ಮಡೆ ಸ್ನಾನದ ಕೊಳೆ, ಹೋಂ ಸ್ಟೇ ದಾಳಿ, ವಿಧಾನ ಸಭೆಯಲ್ಲಿ ನೀಲಿ ಚಿತ್ರ ವೀಕ್ಷಣೆ, ಎಂಡೋ ಪೀಡಿತರ ಬವಣೆ, ಅಷ್ಟ ಮಠಗಳ ಕಚ್ಚಾಟ, ನೀರಿಗಾಗಿ ಹೋರಾಟ, ನಕ್ಸಲ್ ಅಟ್ಟಹಾಸ, ಅತ್ಯಾಚಾರ, ನಕಲಿ ಸ್ವಾಮೀಜಿಗಳ ಧರ್ಮನಿಂದೆ ಹೀಗೆ ಹತ್ತು ಹಲವು ಕಳವಳಕಾರಿ ಬೆಳವಣಿಗೆಗಳು ಸಂಭವಿಸುತ್ತಿದೆ. 
2013 ವರುಷ ಸುಭದ್ರ ರಾಜ್ಯದ ವರುಷವಾಗಬೇಕು. ದುಷ್ಟ ಶಕ್ತಿಗಳ ದಮನವಾಗಬೇಕಿದೆ. ಶಾಂತಿ ಮಂತ್ರದೊಡನೆ ಸಹಬಾಳ್ವೆಯ ಬೀಜವನ್ನು ಬಿತ್ತಿ ನವ ಪರ್ವದ ನಾಂದಿ ಹಾಡಬೇಕಿದೆ. ಭಯೋತ್ಪಾದಕರ ಅಟ್ಟಹಾಸವನ್ನು  ಹೊಸುಕಿ ಹಾಕಬೇಕು.  ಕಪ್ಪುಹಣ, ಜನಲೋಕಪಾಲ್ ಮಸೂದೆ ಕನಸು ನನಸಾಗಬೇಕು. ಜನರ ಆಕಾಂಕ್ಷೆಗಳನ್ನು ಈಡೇರುಸುವಂತಹ ಸರಕಾರ ಬರಬೆಕು. ರಾಜಕೀಯ ಎಲ್ಲೂ ಸಲ್ಲದು. ಉತ್ತಮ ಆಡಳಿತ ಬೇಕು. ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಆಸೆಯಂತೆ ಭಾರತ ಸೂಪರ್ ಪವರ್ ಆಗಬೇಕು ಎನ್ನುವುದು ನಮ್ಮೆಲ್ಲರ ಹೆಬ್ಬಯಕೆ.
ಜನಪ್ರತಿನಿಧಿಗಳೆಂದು ಎನಿಸಿಕೊಂಡವರು ಜನರ ಬಯಕೆಗಳನ್ನು ಈಡೇರಿಸಬೇಕು. ನೀರಮೇಲಿನ ಗುಳ್ಳೆಯಂತೆ, ಆಕಾಶಕ್ಕೆ ರಂಗೋಲಿ ಹಾಕಿದಂತೆ ಜನಪ್ರತಿನಿಧಿಗಳು ಬೊಗಸೆ ಆಶ್ವಾಸನೆ ನೀಡದೆ ಜನರ ಹಿತಾಸಕ್ತಿ ಕಾಯಬೇಕಿದೆ. ಜವಾಬ್ದಾರಿಯ ಹೊಣೆ ಹೊರಬೇಕಿದೆ. ಅನ್ಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿ ಆರ್ಥಿಕ  ವ್ಯವಸ್ಥೆಗಳನ್ನು ಗಟ್ಟಿಗೊಳಿಸಬೇಕಿದೆ. ಒಟ್ಟಾರೆಯಾಗಿ ಭಾರತಕ್ಕೆ 2013 ದೇಶಕ್ಕೆ ಒಳಿತಾಗಬೇಕಿದೆ.
ನವ ವರುಷದ ಹೊಸ್ತಿಲಲ್ಲಿ ನಾಡಿಗೆ ಸುಭಿಕ್ಷೆಯಾಗಲಿ.  ಭ್ರ್ರಷ್ಟಾಚಾರ ಎಂಬ ದಂಧೆ ಸಂಪೂರ್ಣ ನಿರ್ಮುಲನೆಯಗಲಿ  ರೈತಿರಲ್ಲಿ ಸಂತಸದ ನಗು ತರಲಿ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಮಾತಿನಂತೆ ಸ್ತ್ರೀಯರು ರಾತ್ರಿ ವೇಳೆಯೂ ನಿರ್ಭೀತಿಯಿಂದ  ಸಂಚರಿಸುವಂತಾಗಲಿ. ಮೂಡನಂಬಿಕೆ ಎಂಬ ಪೆಡಂಭೂತ ಅಧ:ಪತನವಾಗಲಿ ಹೀಗೆ ಅದೆಷ್ಟೋ ಕನಸುಗಳು ಅಭಿಲಾಷೆಗಳು ನಮ್ಮಲ್ಲಿ ಅಡಕವಾಗಿದೆ. ಇವುಗಳನ್ನೆಲ್ಲಾ ಈಡೇರಿಸುವ ವರ್ಷ ಮುಂದಿನ 12 ತಿಂಗಳುಗಳಾಗಲಿ.
ಹೊಸ ವರುಷ ಎನ್ನುವುದು ಕೇವಲ ಒಂದು ದಿನದ ಸಾಂಕೇತಿಕ ಆಚರಣೆಯಾಗದೆ ಸದಾ ಮಾಸದ ಪರ್ವವಾಗಬೇಕಿದೆ.  ಹೊಸ ವರುಷದಂದು ಮಧ್ಯಪಾನ ಮಾಡಿ ಕುಸ್ತಿ ಮಸ್ತಿ ಮಾಡುವ ಬದಲು ನಮ್ಮ ಸಂಸ್ಕೃತಿಯನ್ನು ಕಾಪಾಡುವಂತಹ  ಆಚರಣೆಯಾಗಲಿ. ದೇವರ ಭಯವೇ ಜ್ಞಾನದ ಆರಂಭ ಎನ್ನುವಂತೆ ದೇವರ ನಾಮದೊಂದಿಗೆ ಹಿರಿಯರ ಆಶೀರ್ವವಾದದೊಂದಿಗೆ ಪ್ರಾರಂಭವಾದರೆ ಒಳಿತು ಎನ್ನುವುದು ಪುರಾಣದ ಮಾತುಗಳು.
ನವ ವರುಷ ನಾಡಿನಲ್ಲಿ ನವ ಯುಗದ ನಾಂದಿ ಹಾಡಲಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡುಯೂರಪ್ಪನವರ ಕನರ್ಾಟಕ ಜನತಾ ಪಕ್ಷ ರಾಜಕೀಯದಲ್ಲಿ ಹೊಸ ದಿಂಗತ ಸೃಷ್ಟಿಸಿದೆ. ಬೆಳಗಾವಿಯ ಸುವರ್ಣ ಸೌಧ, ಅಟಾಲ್ ಜನ ಸ್ನೇಹಿ ಕೇಂದ್ರ ಸಕಾಲ ಹೀಗೆ ಜನರಿಗಾಗಿ ಪ್ರಾರಂಭಿಸಿದ ಅನೇಕ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಜನರು ಬಳಸಿಕೊಂಡು ಮುಂದಿನ ಚುಣಾವಣೆಗೆ ಅಣಿಯಾಗುತ್ತಿರುವ ರಾಜಕೀಯ ಪಕ್ಷಗಳ ಒಳಿತು ಕೆಡುಕುಗಳನ್ನು ಅರಿತು ಜಾನ್ಮೆಯಿಂದ ಮತ ಚಲಾಯಿಸಿ ನವ ವರುಷದ ನವ ರಾಜಕೀಯ ಮನ್ವಂತರಕ್ಕೆ ನಾಂದಿ ಹಾಡಬೇಕಿದೆ.
ಉದಯವಾಗಲಿ ಚೆಲುವ ಕನ್ನಡ ನಾಡು ಎನ್ನು ವ್ಯಾಖ್ಯಾನ ನಮ್ಮ ಧ್ಯೇಯವಾಗಬೇಕಿದೆ.  ದೇಶದಲ್ಲೂ ಹೊಸ ಅರುಣರಾಗ ಹಾಡಬೇಕಿದೆ. ಸೂರ್ಯ ಹೊಂಬೆಳಕು ಅಂಧಕಾರವನ್ನು ತೊಲಗಿಸಿ ಪ್ರಕಾಶಮನವಾದ ಜ್ಞಾನದ ದೀಪ ಬೆಳಗಬೆಕಿದೆ.  ಪಾಕಿಸ್ತಾನ ಭಾರತಕ್ಕೆ ಕ್ರಿಕೆಟ್ ಆಡಲು ಭಾರತಕ್ಕೆ ಆಗಮಿಸಿ ಎರಡು ದೇಶದ ಸಂಬಂಧಗಳ ವಿಚಾರಲ್ಲಿ ನೂತನ ವರ್ಷಕ್ಕೆ ಹೊಸ ಸೇತುವೆ ನಿರ್ಮಿಸಲು ಮುಂದಾಗಿದೆ ಇದೊಂದು ಉತ್ತಮ ಬೆಳವಣಿಗೆ ಇಂತಹ ಸಕರಾತ್ಮಕ ಬೆಳವಣಿಗೆಗಳು ನಿತ್ಯ ನರಂತರವಾಗಿ ನಡೆಯಬೇಕು ಎನ್ನುವುದು ನಮ್ಮ ಅಕಾಂಕ್ಷೆಯಾಗಿದೆ.
ಸರಾಯಿ ಹೆಂಡ ಕುಡಿಡು ಅರೆ ಪ್ರಜ್ಞಾವಸ್ತೆಯಲ್ಲಿ ಹೊಸ ವರುಷ ಆಚರಿಸಿ 'ಸತ್ ' ಪ್ರಜೆಗಳಾಗುವ ಬದಲು ಎಲ್ಲರೂ ಒಂದಾಗಿ ಮಾನವ ಧರ್ಮದ ಪರಿಕಲ್ಪನೆಯೊಂದಿಗೆ ಸುಜ್ಞಾನದ ದೀಪ ಹಚ್ಚಿ ಹೊಸ ವರುಷ ಆಚರಿಸಿ 2013ರಕ್ಕೆ ಉತ್ತಮ ನಾಂದಿ ಹಾಡೋಣ. 2013 ಹೊಸ ವರುಷದ ಶುಭಾಶಯಗಳು
- ಚಂದ್ರಶೇಖರ್ ಎಸ್ ಅಂತರ

Share The Posts

Twitter Delicious Facebook Digg Stumbleupon Favorites More